ಹರಿಯು ಪಂಚಾಶದ್ವರಣ ಸು
ಸ್ವರ ಉದಾತ್ತಾನುದಾತ್ತ ಪ್ರಚಯ
ಸ್ವರಿತ ಸಂಧಿವಿಸರ್ಗ ಬಿಂದುಗಳೊಳಗೆ ತದಾಚ್ಯ |
ಇರುವ ತತ್ತನ್ನಾಮರೂಪಗ
ಳರಿತುಪಾಸನೆಗೈವರಿಳೆಯೊಳು
ಸುರರೆ ಸರಿ ನರರಲ್ಲ ಅವರಾಡುವುದೆ ವೇದಾರ್ಥ  ||೧||

ಈಶನಲಿ ವಿಜ್ಞಾನ ಭಗವ
ದ್ದಾಸರಲಿ ಸದ್ಭಕ್ತಿ ವಿಷಯ ನಿ
ರಾಸೆ ಮಿಥ್ಯಾವಾದದಲಿ ಪ್ರದ್ವೇಷ ನಿತ್ಯದಲಿ |
ಈ ಸಮಸ್ತ ಪ್ರಾಣಿಗಳಲಿ ರ
ಮೇಶನಿಹನೆಂದರಿದವರ ಅಭಿ
ಲಾಷೆಗಳ ಪೂರೈಸುವುದೆ ಮಹಯಜ್ಞ ಹರಿಪೂಜೆ  ||೨||

ತ್ರಿದಶ ಏಕಾತ್ಮನೆನಿಸಿ ಭೂ
ಉದಕ ಶಿಖಿಯೊಳು ಹತ್ತು ಕರಣದಿ
ಅಧಿಪರೆನಿಸುವ ಪ್ರಾಣ ಮುಖ್ಯಾದಿತ್ಯರೊಳು ನೆಲೆಸಿ |
ವಿದಿತನಾಗಿದ್ದನವರತ ನಿರ
ವಧಿಕ ಮಹಿಮನು ಸಕಲ ವಿಷಯವ
ನಿಧನನಾಮಕ ಸಂಕರುಷಣಾಹ್ವಯನು ಸ್ವೀಕರಿಪ  ||೩||

ದಹಿಕ ದೈಶಿಕ ಕಾಲಿಕತ್ರಯ
ಗಹನಕರ್ಮಗಳುಂಟು ಇದರೊಳು
ವಿಹಿತ ಕರ್ಮಗಳರಿತು ನಿಷ್ಕಾಮಕನು ನೀನಾಗಿ |
ಬೃಹತಿನಾಮಕ ಭಾರತೀಶನ
ಮಹಿತ ರೂಪವ ನೆನೆದು ಮನದಲಿ
ಅಹರಹರ್ಭಗವಂತಗರ್ಪಿಸು ಪರಮ ಭಕುತಿಯಲಿ  ||೪||

ಮೂರು ವಿಧ ಕರ್ಮಗಳೊಳಗೆ ಕಂ
ಸಾರಿ ಭಾರ್ಗವ ಹಯವದನ ಸಂ
ಪ್ರೇರಕನು ತಾನಾಗಿ ನವರೂಪಂಗಳನು ಧರಿಸಿ |
ಸೂರಿ ಮಾನವ ದಾನವರೊಳು ವಿ
ಕಾರ ಶೂನ್ಯನು ಮಾಡಿ ಮಾಡಿಸಿ
ಸಾರ ಭೋಕ್ತನು ಸ್ವೀಕರಿಸಿ ಕೊಡುತಿಪ್ಪ ಜೀವರಿಗೆ ||೫||

ಅನಲ ಪಕ್ವವ ಗೈಸಿದನ್ನವ
ನನಲನೊಳು ಹೋಮಿಸುವ ತೆರದಂ
ತನಿಮಿಷೇಶನು ಮಾಡಿ ಮಾಡಿಸಿದಖಿಲ ಕರ್ಮಗಳ |
ಮನವಚನ ಕಾಯದಲಿ ತಿಳಿದನು
ದಿನದಿ ಕೊಡು ಶಂಕಿಸದೆ ವೃಜಿನಾ
ರ್ದನ ಸದಾ ಕೈಗೊಂಡು ಸಂತಯಿಸುವನು ತನ್ನವರ ||೬||

ಕುದುರೆ ಬಾಲದ ಕೊನೆಯ ಕೂದಲ
ತುದಿ ವಿಛಾಗವ ಮಾಡಿ ಶತವಿಧ
ವರರೊಳೊಂದನು ನೂರು ಭಾಗವ ಮಾಡಲೆಂತಿಹುದೊ |
ವಿಧಿಭವಾದಿ ಸಮಸ್ತ ದಿವಿಜರ
ಮೊದಲು ಮಾಡಿ ತೃಣಾಂತ ಜೀವರೊ
ಳಧಿಕ ನ್ಯೂನತೆಯಿಲ್ಲವೆಂದಿಗು ಜೀವ ಪರಮಾಣು  ||೭||

ಜೀವನಂಗುಷ್ಟಾಗ್ರ ಮೂರುತಿ
ಜೀವನಂಗುಟ ಮಾತ್ರ ಮೂರುತಿ
ಜೀವನ ಪ್ರಾದೇಶ ಜೀವಾಕಾರ ಮೂರ್ತಿಗಳು |
ಏವಮಾದಿ ಅನಂತ ರೂಪದಿ
ಯಾವದವಯವಗಳೊಳು ವ್ಯಾಪಿಸಿ
ಕಾವ ಕರುಣಾಳುಗಳ ದೇವನು ಈ ಜಗತ್ರಯವ  ||೮||

ಬಿಂಬ ಜೀವಾಂಗುಷ್ಟ ಮಾತ್ರದಿ
ಇಂಬುಗೊಂಡಿಹ ಸರ್ವರೊಳು ಸೂ
ಕ್ಷ್ಮಾಂಬರದಿ ಹೃತ್ಕಮಲ ಮಧ್ಯನಿವಾಸಿಯೆಂದೆನಿಸಿ |
ಎಂಬರೀತಗೆ ಕೋವಿದರು ವಿ
ಶ್ವಂಭರಾತ್ಮ ಪ್ರಾಜ್ಞ ಭಕ್ತಕು
ಟುಂಬಿ ಸಂತೈಸುವನು ಈ ಪರಿ ಬಲ್ಲ ಭಜಕರನು  ||೯||

ಪುರುಷನಾಮಕ ಸರ್ವ ಜೀವರೊ
ಳಿರುವ ದೇಹಾಕಾರ ರೂಪದಿ
ಕರಣ ನಿಯಾಮಕ ಹೃಷೀಕಪನಿಂದ್ರಿಯಂಗಳಲಿ |
ತಿರಿಯನಾಮಕ ವಿಶ್ವ ತಾ ಹ
ನ್ನೆರಡು ಬೆರಳುಳಿದುತ್ತಮಾಂಗದಿ
ಎರಡಧಿಕ ಎಪ್ಪತ್ತು ಸಾವಿರ ನಾಡಿಯೊಳಗಿಪ್ಪ  ||೧೦||

ವ್ಯಾಪಕನು ತಾನಾಗಿ ಜೀವಸ್ವ
ರೂಪದೇಹದ ಒಳಹೊರಗೆ ನಿ
ರ್ಲೇಪನಾಗಿಹ ಜೀವಕೃತ ಕರ್ಮಗಳನಾಚರಿಸಿ |
ಶ್ರೀ ಪಯೋಜಭವೇರರಿಂದ ಪ್ರ
ದೀಪವರ್ಣ ಸುಮೂರ್ತಿ ಮಧ್ಯಗ
ತಾ ಪೊಳೆವ ವಿಶ್ವಾದಿರೂಪದಿ ಸೇವೆ ಕೈಗೊಳುತ  ||೧೧||

ಗರುಡ ಶೇಷ ಭವಾದಿ ನಾಮವ
ಧರಿಸಿ ಪವನ ಸ್ವರೂಪ ದೇಹದಿ
ಕರಣ ನಿಯಾಮಕನು ತಾನಾಗಿಪ್ಪ ಹರಿಯಂತೆ |
ಸರಸಿಜಾಸನ ವಾಣಿ ಭಾರತಿ
ಭರತನಿಂದೊಡಗೂಡಿ ಲಿಂಗದಿ
ಇರುತಿಹರು ಮಿಕ್ಕಾದಿತೇಯರಿಗಿಲ್ಲವಾಸ್ಥಾನ  ||೧೨||

ಜೀವನಕೆ ತುಷದಂತೆ ಲಿಂಗವು
ಸಾವಕಾಶದಿ ಪೊಂದಿ ಸುತ್ತಲು
ಪ್ರಾವರಣ ರೂಪದಲಿಪ್ಪುದು ಭಗವದಿಚ್ಛ್ಹೆಯಲಿ |
ಕೇವಲ ಜಡಪ್ರಕೃತಿ ಇದಕಧಿ-
ದೇವತೆಯು ಮಹಲಕುಮಿಯೆನಿಪಳು
ಆ ವಿರಜೆಯ ಸ್ನಾನ ಪರಿಯಂತರದಿ ಹತ್ತಿಹುದು ||೧೩||

ಆರಧಿಕ ದಶಕರೆಗಳುಳ್ಳ ಶ
ರೀರವನಿರುದ್ಧಗಳ ಮಧ್ಯದಿ
ಸೇರಿಪ್ಪವು ಜೀವಪರಮಾಚ್ಛ್ಹಾದಿಕ ದ್ವಯವು |
ಬಾರದಂದದಿ ದಾನವರನತಿ
ದೂರಗೈಸುತ ಶ್ರೀ ಜನಾರ್ದನ
ಮೂರು ಗುಣದೊಳಗಿಪ್ಪನೆಂದಿಗು ತ್ರಿವೃತುವೆಂದೆನಿಸಿ  ||೧೪||

ರುದ್ರ ಮೊದಲಾದಮರರಿಗೆ ಅನಿ
ರುದ್ಧ ದೇಹವೆ ಮನೆಯೆನಿಸುವುದು
ಇದ್ದು ಕೆಲಸವ ಮಾಡರಲ್ಲಿಂದಿತ್ತ ಸ್ಥೂಲದಲಿ |
ಕೃದ್ಧ ಖಳದಿವಿಜರು ಪರಸ್ಪರ
ಸ್ಪರ್ಧೆಯಿಂದಲಿ ದ್ವಂದ್ವ ಕರ್ಮಸ
ಮೃದ್ಧಿಗಳನಾಛರಿಸುವರು ಪ್ರಾಣೇಶನಾಜ್ಞೆಯಲಿ  ||೧೫||

ಮಹಿಯೊಳಗೆ ಸುಕ್ಷೇತ್ರ ತೀರ್ಥದಿ
ತುಹಿನ ವರುಷ ವಸಂತಕಾಲದಿ
ದಹಿಕ ದೈಶಿಕ ಕಾಲಿಕತ್ರಯ ಧರ್ಮ ಕರ್ಮಗಳ |
ದೃಹಿಣ ಮೊದಲಾದವರರೆಳ್ಳರು
ವಹಿಸಿ ಗುಣಗಳನನುಸರಿಸಿ ಸ
ನ್ನಿಹಿತರಾಗಿದ್ದೆಲ್ಲರೊಳು ಮಾಡುವರು ವ್ಯಾಪಾರ  ||೧೬||

ಕೇಶ ಸಾಸಿರವಿಧ ವಿಭಾಗವ
ಗೈಸಲೆನಿತನಿತಿಹ ಸುಷುಮ್ನವು
ಆ ಶಿರಾಂತದಿ ವ್ಯಾಪಿಸಿಹುದೀ ದೇಹ ಮಧ್ಯದಲಿ |
ಆ ಸುಷುಮ್ನಕೆ ವಜ್ರ ಕಾರ್ಯ ಪ್ರ
ಕಾಶಿನೀ ವೈದ್ಯುತಿಗಳಿಹವು ಪ್ರ
ದೇಶದಲಿ ಪಶ್ಚಿಮಕೆ ಉತ್ತರ ಪೂರ್ವ ದಕ್ಷಿನಕೆ  ||೧೭||

ಆ ನಳಿನಭವ ನಾಡಿಯೊಳಗೆ ತ್ರಿ
ಕೋಣ ಚಕ್ರವು ಇಪ್ಪುದಲ್ಲಿ ಕೃ
ಶಾನು ಮಂಡಲ ಮಧ್ಯಗನು ಸಂಕರುಷಣಾಹ್ವಯನು |
ಹೀನ ಪಾಪಾತ್ಮಕ ಪುರುಷನ
ಹಾನಿಗೈಸುತ ದಿನದಿನದಿ ವಿ
ಜ್ಞಾನಮಯ ಶ್ರೀವಾಸುದೇವನು ಐದಿಸುವ ಕರುಣಿ ||೧೮||

ಮಧ್ಯನಾಡಿಯ ಮಧ್ಯದಲಿ ಹೃ
ತ್ಪದ್ಮ ಮೂಲದಿ ಮೂಲಪತಿ ಪದ
ಪದ್ಮ ಮೂಲದಲಿಪ್ಪ ಪವನನ ಪಾದಮೂಲದಲಿ |
ಪೊದ್ದಿಕೊಂಡಿಹ ಜೀವಲಿಂಗನಿ
ರುದ್ಧ ದೇಹ ವಿಶಿಷ್ಟನಾಗಿ ಕ
ಪರ್ದಿ ಮೊದಲಾದಮರರೆಲ್ಲರು ಕಾದು ಕೊಂಡಿಹರು ||೧೯||

ನಾಳ ಮಧ್ಯದಲಿಪ್ಪ ಹೃತ್ಕೀ
ಲಾಲಜದೊಳಿಪ್ಪಷ್ಟದಳದಿ ಕು
ಲಾಲ ಚಕ್ರದ ತೆರದಿ ಚರಿಸುತ ಹಂಸ ನಾಮಕನು |
ಕಾಲ ಕಾಲಗಳಲ್ಲಿ ಎಣ್ದೆಸೆ
ಪಾಲಕರ ಕೈಸೇವೆಗೊಳುತ ಕೃ
ಪಾಳು ಅವರಭಿಲಾಷೆಗಳ ಪೂರೈಸಿ ಕೊಡುತಿಪ್ಪ  ||೨೦||

ವಾಸವಾನುಜ ರೇಣುಕಾತ್ಮಜ
ದಾಶರಥಿ ವೃಜಿನಾರ್ದನಮಲ ಜ
ಲಾಶಯಾಲಯ ಹಯವದನ ಶ್ರೀಕಪಿಲ ನರಸಿಂಹ |
ಈಸು ರೂಪದೊಳವರವರು ಸಂ
ತೋಷಪಡಿಸುವ ನಿತ್ಯ ಸುಖಮಯ
ವಾಸವಾಗಿಹ ಹೃತ್ಕಮಲದೊಳು ಬಿಂಬನೆಂದೆನಿಸಿ  ||೨೧||

ಸುರಪನಾಲಯಕೈದಿದಡೆ ಮನ
ವೆರಗುವುದು ಸತ್ಪುಣ್ಯ ಮಾರ್ಗದಿ
ಬರಲು ವಹ್ನಿಯ ಮನೆಗೆ ನಿದ್ರಾಲಸ್ಯ ಹರಿ ತೃಷೆಯು |
ತರಣಿ ತನಯನಿಕೇತನದಿ ಸಂ
ಭರಿತ ಕೋಪಾಟೋಪ ತೋರುವು
ದರವಿದೂರನು ನಿಋ ಋತಿಯೊಳಿರೆ ಪಾಪಗಳ ಮಾಳ್ಪ  ||೨೨||

ವರುಣನಲ್ಲಿ ವಿನೋದ ಹಾಸ್ಯವು
ಮರುತನೊಳು ಗಮನಾಗಮನ ಹಿಮ
ಕರಧನಾಧಿಪರಲ್ಲಿ ಧರ್ಮನ ಬುದ್ಧಿ ಜನಿಸುವುದು |
ಹರನ ಮಂದಿರದಲ್ಲಿ ಗೋಧನ
ಧರಣಿ ಕನ್ಯಾ ದಾನಗಳು ಒಂ
ದರೆಗಳಿಗೆ ತಡೆಯದಲೆ ಕೊಡುತಿಹ ಚಿತ್ತ ಪುಟ್ಟುವುದು  ||೨೩||

ಹೃದಯದೊಳಗೆ ವಿರಕ್ತಿ ಕೇಸರ
ಕೊದಗೆ ಸ್ವಪ್ನ ಸುಷುಪ್ತಿ ಲಿಂಗದಿ
ಮಧುಹ ಕರ್ಣಿಕೆಯಲ್ಲಿ ಬರೆ ಜಾಗ್ರತಿಯು ಪುಟ್ಟುವುದು |
ಸುದರುಶನ ಮೊದಲಾದ ಅಷ್ಟಾ
ಯುಧವ ಪಿಡಿದು ದಿಶಾಧಿಪತಿಗಳ
ಸದನದಲಿ ಸಂಚರಿಸುತೀ ಪರಿ ಬುದ್ಧಿಗಳ ಕೊಡುವ ||೨೪||

ಸೂತ್ರ ನಾಮಕ ಪ್ರಾಣಪತಿ ಗಾ
ಯತ್ರಿ ಸಂಪ್ರತಿಪಾದ್ಯನಾಗೀ
ಗಾತ್ರದೊಳು ನೆಲೆಸಿರಲು ತಿಳಿಯದೆ ಕಂಡ ಕಂಡಲ್ಲಿ |
ಧಾತ್ರಿಯೊಳು ಸಂಚರಿಸಿ ಪುತ್ರಕ
ಳತ್ರ ಸಹಿತನುದಿನದಿ ತೀರ್ಥ
ಕ್ಷೇತ್ರ ಯಾತ್ರೆಯ ಮಾಡಿದೆವು ಎಂದೆನುತ ಹಿಗ್ಗುವರು  ||೨೫||

ನಾರಸಿಂಹ ಸ್ವರೂಪದೊಳಗೆ ಶ
ರೀರನಾಮದಿ ಕರೆಸುವನು ಹದಿ
ನಾರು ಕಳೆಗಳುಳ್ಳ ಲಿಂಗದಿ ಪುರುಷ ನಾಮಕನು |
ತೋರುವನು ಅನಿರುದ್ಧದೊಳು ಶಾಂ
ತೀರಮಣನನಿರುದ್ಧ ರೂಪದಿ
ಪ್ರೇರಿಸುವ ಪ್ರದ್ಯುಮ್ನ ಸ್ಥೂಲ ಕಳೇವರದೊಳಿದ್ದು  ||೨೬||

ಮೊದಲು ತ್ವಕ್ಚರ್ಮಗಳು ಮಾಂಸವು
ರುಧಿರಮೇದೋ ಮಜ್ಜವಸ್ಥಿಗ
ಳಿದರೊಳಗೆ ಏಕೋನ ಪಂಚಾಶನ್ಮರುದ್ಗಣವು |
ನಿಧನ ಹಿಂಕಾರಾದಿ ಸಾಮಗ
ಅದರ ನಾಮದಿ ಕರೆಸುತೊಂಬ
ತ್ತಧಿಕ ನಾಲ್ವತ್ತೆನಿಪ ರೂಪದಿ ಧಾತುಗಳೊಳಿಪ್ಪ  ||೨೭||

ಸಪ್ತ ಧಾತುಗಳೊಳ ಹೊರಗೆ ಸಂ
ತಪ್ತ ಲೋಹಗತಾಗ್ನಿಯಂದದಿ
ಸಪ್ತ ಸಾಮಗನಿಪ್ಪ ಅನ್ನ ಮಯಾದಿ ಕೋಶದೊಳು |
ಲಿಪ್ತನಾಗದೆ ತತ್ತದಾಹ್ವಯ
ಕ್ಲುಪ್ತ ಭೋಗವ ಕೊಡುತ ಸ್ವಪ್ನಸು
ಷುಪ್ತಿ ಜಾಗ್ರತೆಯೀವ ತೈಜಸ ಪ್ರಾಜ್ಞ ವಿಶ್ವಾಖ್ಯ  ||೨೮||

ತೀವಿಕೊಂಡಿಹವಲ್ಲಿ ಮಜ್ಜ ಕ
ಳೇವರದಿ ಯಂಗುಳಿಯ ಪರ್ವದ
ಠಾವಿನಲಿ ಮುನ್ನೂರರವತ್ತೆನಿಪ ತಿಸ್ಥಳದಿ |
ಸಾವಿರದ ಎಂಭತ್ತು ರೂಪವ
ಕೋವಿದರು ಪೇಳುವರು ದೇಹದಿ
ದೇವತೆಗಳೊಡಗೂಡಿ ಕ್ರೀಡಿಸುವನು ರಮಾ ರಮಣ  ||೨೯||

ಕೀಟ ಪೇಶಸ್ಕಾರಿ ನೆನವಿಲಿ
ಕೀಟ ಭಾವವ ತೊರೆದು ತದ್ವತ್
ಖೇಟ ರೂಪವನೈದಿ ಆಡುವ ತೆರದಿ ಭಕುತಿಯಲಿ |
ಕೈಟಭಾರಿಯ ಧ್ಯಾನದಿಂದ ಭ
ವಾಟವಿಯನತಿ ಶೀಘ್ರದಿಂದಲಿ
ದಾಟಿ ಸಾರೂಪ್ಯವನು ಐದುವರಲ್ಪ ಜೀವಿಗಳು  ||೩೦||

ಈ ಪರಿಯ ದೇಹದೊಳು ಭಗವ
ದ್ರೂಪಗಳ ಮರೆಯದಲೆ ಮನದಿ ಪ
ದೇಪದೇ ಭಕುತಿಯಲಿ ಸ್ಮರಿಸುತಲಿಪ್ಪ ಭಕುತರಿಗೆ |
ಗೋಪತಿ ಜಗನ್ನಾಥವಿಠಲ ಸ
ಮೀಪಗನು ತಾನಾಗಿ ಸಂತತ
ಸಾಪರೋಕ್ಷಿಯ ಮಾಡಿ ಪೊರೆವನು ಎಲ್ಲ ಕಾಲದಲಿ  ||೩೧||